ಮಹಾಭಾರತ

Anindita Basu
ನಿಂದ, Dilip Sitaram ಅವರಿಂದ ಅನುವಾದಿಸಲಾಗಿದೆ
ನಲ್ಲಿ ಪ್ರಕಟಿಸಲಾಗಿದೆ
Translations
ಮುದ್ರಿಸಿ PDF
Karna in the Kurukshetra War (by Unknown Artist, Public Domain)
ಕುರುಕ್ಷೇತ್ರ ಯುದ್ಧದಲ್ಲಿ ಕರ್ಣ Unknown Artist (Public Domain)

ಮಹಾಭಾರತ ಕಾವ್ಯವು ಪ್ರಾಚೀನಭಾರತದ ಒಂದು ಮಹಾಕಥನ ಕಾವ್ಯ. ಈ ದೀರ್ಘ ಕಥೆಯು ಒಂದೇ ರಾಜಮನೆತನದ ಎರಡು ಕುಟುಂಬಗಳಾದ ಕೌರವರು ಮತ್ತು ಪಾಂಡವರ ಮಧ್ಯೆ ಹಸ್ತಿನಪುರದ ಸಿಂಹಾಸನದ ಒಡೆತನಕ್ಕೆ ನಡೆದ ಕುರುಕ್ಷೇತ್ರ ಯುದ್ಧದ ಸುತ್ತ ಸುತ್ತುತ್ತದೆ. ಈ ನಿರೂಪಣೆಯಲ್ಲಿ ಅನೇಕ ಸಣ್ಣ ಸಣ್ಣ ಉಪಕಥೆಗಳು ಮತ್ತು ತತ್ವ ಚಿಂತಾತ್ಮಕ ವಾದ / ಪ್ರವಚನಗಳು ಹೆಣೆದುಕೊಂಡಿವೆ. ಕೃಷ್ಣ ದ್ವೈಪಾಯನ ವ್ಯಾಸರೆಂಬ ಋಷಿಯು ಈ ಮಹಾಕಾವ್ಯದ ರಚನೆಗಾರ ಮತ್ತು ಸ್ವತಃ ಈ ಕಥೆಯಲ್ಲಿ ಬರುವ ಪಾತ್ರಧಾರಿ. ದಂತಕಥೆಯ ಪ್ರಕಾರ ವ್ಯಾಸ ಋಷಿಯು ಗಜಮುಖ ಹೊಂದಿರುವ ಗಣಪತಿ ದೇವರ ಕೈಯಲ್ಲಿ ಇದನ್ನು ಹೇಳಿ ಬರೆಸಿದರು. ಈ ಮಹಾಕಾವ್ಯವನ್ನು ಸರಿಸುಮಾರು ಕ್ರಿ. ಪೂ. ನಾಲ್ಕನೇ ಶತಮಾನ ಅಥವಾ ಅದಕ್ಕಿಂತ ಮುಂಚೆ ರಚಿಸಲಾಗಿದೆ ಎಂದು ಭಾವಿಸಲಾಗಿದೆ. 100,000 ಪದ್ಯಗಳನ್ನು ಹೊಂದಿರುವ ಈ ಮಹಾಕಾವ್ಯ ಇದುವರೆಗೆ ಬರೆಯಲಾದ ಅತಿದೊಡ್ಡ ಕಾವ್ಯವೆಂದು ಪರಿಗಣಸಲಾಗಿದೆ. ಈ ಮಹಾಕಾವ್ಯದ ಘಟನೆಗಳು ಭಾರತೀಯ ಉಪಖಂಡ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆಯುತ್ತದೆ. ಈ ಮಹಾಕಾವ್ಯವನ್ನು ಮೊದಲಬಾರಿಗೆ ವ್ಯಾಸ ಋಷಿಯ ಶಿಷ್ಯನೊಬ್ಬನು ಕಥೆಯಲ್ಲಿ ಬರುವ ಪ್ರಮುಖ ಪಾತ್ರಧಾರಿಯ ಮರಿಮಗನು ಕೈಗೊಂಡಿದ್ದ ಸರ್ಪಯಾಗದ ಸಂದರ್ಭದಲ್ಲಿ ನಿರೂಪಣೆ ಮಾಡಿದನು. ಭಗವದ್ಗೀತೆಯನ್ನು ಒಳಗೊಂಡಂತೆ ಮಹಾಭಾರತವು ಪ್ರಾಚೀನ ಭಾರತೀಯ ಮತ್ತು ವಿಶ್ವ ಸಾಹಿತ್ಯದ ಪ್ರಮುಖ ಗ್ರಂಥಗಳಲ್ಲಿ ಒಂದಾಗಿದೆ.

ಮುನ್ನುಡಿ

ಹಸ್ತಿನಪುರದ ರಾಜನಾದ ಶಾಂತನು ಗಂಗೆಯನ್ನು (ಗಂಗಾನದಿಯು ಭಾರತದ ಮಹಾಪವಿತ್ರ ನದಿಗಳಲ್ಲಿ ಒಂದು ಹಾಗೂ ಗಂಗೆಯನ್ನು ಈ ನದಿಯ ಮೂರ್ತಿರೂಪ ಎಂದು ಭಾವಿಸಲಾಗುತ್ತದೆ) ಮದುವೆಯಾಗಿದ್ದನು ಹಾಗೂ ಅವರಿಗೆ ದೇವವ್ರತನೆಂಬ ಪುತ್ರನಿದ್ದನು. ದೇವವ್ರತನು ಹಲವು ವರ್ಷಗಳಲ್ಲಿ ಒಬ್ಬ ನಿಪುಣ ರಾಜಕುಮಾರನಾಗಿ ಬೆಳೆಯುತ್ತಾನೆ. ಹೀಗಿದ್ದಾಗ, ಶಾಂತನು ರಾಜನು ಸತ್ಯವತಿಯೆಂಬ ರೂಪವತಿಯ ಪ್ರೇಮದಲ್ಲಿ ಬೀಳುತ್ತಾನೆ ಹಾಗೂ ಅವಳನ್ನು ವಿವಾಹವಾಗುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾನೆ . ಸತ್ಯವತಿಯ ತಂದೆಯಾದ ಮೀನುಗಾರನು ಒಂದು ಷರತ್ತಿನ ಮೇಲೆ ಈ ವಿವಾಹಕ್ಕೆ ಒಪ್ಪುತ್ತಾನೆ – ಆ ಷರತ್ತು ಸತ್ಯವತಿಯ ಮಕ್ಕಳೇ ಹಾಗೂ ಅವರ ಸಂತಾನವೇ ಹಸ್ತಿನಪುರದ ಮುಂದಿನ ರಾಜರಾಗಬೇಕೆಂಬುದು. ದೇವವ್ರತನ ಸ್ವಾಭಾವಿಕ ರಾಜನಾಗುವ ಹಕ್ಕುಗಳನ್ನು ನಿರಾಕರಿಸಲು ಇಷ್ಟವಿಲ್ಲದೆ ಶಾಂತನು ಈ ಷರತ್ತಿಗೆ ಒಪ್ಪುವುದಿಲ್ಲ. ಆದರೆ ಈ ವಿಷಯ ತಿಳಿದ ದೇವವ್ರತನು ಸತ್ಯವತಿಯ ಮನೆಗೆ ತೆರಳಿ ತಾನು ಸಿಂಹಾಸನವನ್ನು ತ್ಯಜಿಸುತ್ತೇನೆಂದೂ ಮತ್ತು ಜೀವನಪರ್ಯಂತ ಬ್ರಹ್ಮಚಾರಿಯಾಗಿಯೇ ಉಳಿಯುತ್ತೇನೆಂದು ಪ್ರತಿಜ್ಞೆ ಮಾಡಿ, ಸತ್ಯವತಿಯನ್ನು ತನ್ನ ತಂದೆಯನ್ನು ವಿವಾಹವಾಗಲು ಕೇಳಿಕೊಳ್ಳುತ್ತಾನೆ. ನಂತರ ಸತ್ಯವತಿಯನ್ನು ಅರಮನೆಗೆ ಕರೆದೊಯ್ದು ಶಾಂತನು-ಸತ್ಯವತಿಯರ ವಿವಾಹವನ್ನು ನೆರವೇರಿಸುತ್ತಾನೆ. ದೇವವ್ರತನು ತೆಗೆದುಕೊಂಡ ಈ ಭಯಂಕರ ಮತ್ತು ನಿಸ್ವಾರ್ಥ ಪ್ರತಿಜ್ಞೆಇಂದಾಗಿ ಅವನು ಭೀಷ್ಮ ಎಂದು ಕರೆಯಲ್ಪಡುತ್ತಾನೆ. ತನ್ನ ಮಗನ ಈ ನಿಸ್ವಾರ್ಥ ತ್ಯಾಗಕ್ಕೆ ಮೆಚ್ಚಿದ ಶಾಂತನು ದೇವವ್ರತನಿಗೆ ತನ್ನ ಮರಣದ ಸಮಯವನ್ನು ತಾನೇ ನಿರ್ಧರಿಸುವ ಶಕ್ತಿಯ ವರವನ್ನು ನೀಡುತ್ತಾನೆ.

ಕಾಲಕ್ರಮೇಣ, ಶಾಂತನು ಮತ್ತು ಸತ್ಯವತಿಗೆ ಇಬ್ಬರು ಗಂಡು ಮಕ್ಕಳು ಜನಿಸಿದರು. ಅದಾದ ಸ್ವಲ್ಪ ದಿನಗಳಲ್ಲೇ , ಶಾಂತನು ಕಾಲವಶನಗುತ್ತಾನೆ. ಆ ಸಮಯದಲ್ಲಿ ಸತ್ಯವತಿಯ ಪುತ್ರರು ಇನ್ನೂ ಅಪ್ರಾಪ್ತ ವಯಸ್ಸಿನವರಾಗಿದ್ದರಿಂದ, ರಾಜ್ಯದ ವ್ಯವಹಾರಗಳನ್ನು ಭೀಷ್ಮ ಮತ್ತು ಸತ್ಯವತಿ ನಿರ್ವಹಿಸುತ್ತಿದ್ದರು. ಈ ಪುತ್ರರು ಪ್ರೌಢಾವಸ್ಥೆಗೆ ತಲುಪಿದಾಗ, ಹಿರಿಯನಾದವನು ಕೆಲವು ಗಂಧರ್ವರೊಂದಿಗೆ (ಸ್ವರ್ಗೀಯರು) ನಡೆದ ಘರ್ಷಣೆಯಲ್ಲಿ ಸಾವನ್ನಪ್ಪಿದ್ದನು. ಆದ್ದರಿಂದ ಕಿರಿಯ ಮಗ ವಿಚಿತ್ರವೀರ್ಯನಿಗೆ ಪಟ್ಟವನ್ನು ಕಟ್ಟಲಾಗಿ ರಾಜನನ್ನಾಗಿ ಮಾಡಲಾಗುತ್ತದೆ. ನಂತರ ಭೀಷ್ಮನು ನೆರೆಯ ರಾಜ್ಯದ ಮೂವರು ರಾಜಕುಮಾರಿಯರನ್ನು ಅಪಹರಿಸಿ ವಿಚಿತ್ರವೀರ್ಯನಿಗೆ ಮದುವೆ ಮಾಡಲು ಹಸ್ತಿನಾಪುರಕ್ಕೆ ಕರೆತಂದನು. ಈ ರಾಜಕುಮಾರಿಯರಲ್ಲಿ ಹಿರಿಯವಳು ತಾನು ಬೇರೊಬ್ಬನನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದರಿಂದ, ಅವಳನ್ನು ಬಿಟ್ಟುಬಿಡಲಾಯಿತು; ಇತರ ಇಬ್ಬರು ರಾಜಕುಮಾರಿಯರನ್ನು ವಿಚಿತ್ರವೀರ್ಯನ ಜೊತೆ ಮದುವೆ ಮಾಡಲಾಗುತ್ತದೆ. ಇದಾದ ಸ್ವಲ್ಪ ದಿನಗಳಲ್ಲೇ ವಿಚಿತ್ರವೀರ್ಯನು ಪುತ್ರಹೀನನಾಗಿ ಅಕಾಲ ಮರಣ ಹೊಂದುತ್ತಾನೆ.

ಧೃತರಾಷ್ಟ್ರ, ಪಾಂಡು ಮತ್ತು ವಿದುರ

ಧೃತರಾಷ್ಟ್ರನು ದೇಶದ ಉಳಿದ ಎಲ್ಲಾ ರಾಜಕುಮಾರರಿಗಿಂತ ಅತ್ಯಂತ ಬಲಿಷ್ಠನಾಗಿದ್ದನು. ಪಾಂಡು ಯುದ್ಧ ಮತ್ತು ಬಿಲ್ಲುವಿದ್ಯೆಯಲ್ಲಿ ನಿಪುಣನಾಗಿದ್ದನು ಮತ್ತು ವಿದುರನು ವಿದ್ಯೆ, ರಾಜಕೀಯ ಮತ್ತು ರಾಜನೀತಿಯ ಎಲ್ಲಾ ಭಾಗಗಳನ್ನು ಓದಿ ಕಲಿತಿದ್ದನು.

ಈ ಸಂದರ್ಭದಲ್ಲಿ ಸತ್ಯವತಿ ರಾಜವಂಶಾವಳಿ ನಾಶವಾಗದಂತೆ ಸತ್ಯವತಿ ತನ್ನ ಮಗ ವ್ಯಾಸನಿಂದ ಇಬ್ಬರು ರಾಣಿಯರ ಗರ್ಭಧಾರಣೆ ಆಗುವಂತೆ ಅನುವು ಮಾಡಿಕೊಡುತ್ತಾಳೆ. (ಶಂತನುವನ್ನು ಮದುವೆಯಾಗುವ ಮೊದಲು ಸತ್ಯವತಿಗೆ ಪರಾಶರ ಎಂಬ ಮಹಾನ್ ಋಷಿಯಿಂದ ವ್ಯಾಸನು ಜನಿಸಿರುತ್ತಾನೆ). ಆಗಿನ ಕಾಲದ ನಿಯಮಗಳ ಪ್ರಕಾರ, ಅವಿವಾಹಿತ ತಾಯಿಗೆ ಜನಿಸಿದ ಮಗುವನ್ನು ಆ ತಾಯಿಯು ತದನಂತರ ಮದುವೆಯಾದ ಪತಿಯ ಮಲಮಗ ಎಂದು ಪರಿಗಣಿಸಲಾಗುತ್ತಿತ್ತು; ಆ ನಿಯಮದ ಪ್ರಕಾರ, ವ್ಯಾಸನನ್ನು ಶಂತನುವಿನ ಮಗನೆಂದು ಪರಿಗಣಿಸಬಹುದಿತ್ತು ಮತ್ತು ಹಸ್ತಿನಾಪುರವನ್ನು ಆಳುತ್ತಿದ್ದ ಕುರು ಕುಲವನ್ನು ಮುಂದುವರೆಸಲು ಅದನ್ನು ಬಳಸಿಕೊಳ್ಳಬಹುದಿತ್ತು. ಈ ಪ್ರಯತ್ನ ಸಫಲವಾಗಿ ವ್ಯಾಸನಿಂದ ಹಿರಿಯ ರಾಣಿಗೆ ಧೃತರಾಷ್ಟ್ರ ಎಂಬ ಕುರುಡ ಮಗನೂ , ಮತ್ತು ಕಿರಿಯಳಿಗೆ ಪಾಂಡು ಎಂಬ ಆರೋಗ್ಯವಂತ ಆದರೆ ಅತ್ಯಂತ ಬಿಳಿಚಿಕೊಂಡ ಮಗ ಜನಿಸಿದನು. ಇದಲ್ಲದೇ , ಈ ರಾಣಿಯರ ಸೇವಕಿಗೆ ವ್ಯಾಸನಿಂದಲೇ ವಿದುರ ಎಂಬ ಮಗನು ಜನಿಸಿದನು. ಭೀಷ್ಮನು ಈ ಮೂವರು ಹುಡುಗರನ್ನು ಬಹಳ ಕಾಳಜಿಯಿಂದ ಬೆಳೆಸಿದನು. ಧೃತರಾಷ್ಟ್ರನು ದೇಶದ ಉಳಿದ ಎಲ್ಲಾ ರಾಜಕುಮಾರರಿಗಿಂತ ಅತ್ಯಂತ ಬಲಿಷ್ಠನಾಗಿದ್ದನು. ಪಾಂಡು ಯುದ್ಧ ಮತ್ತು ಬಿಲ್ಲುವಿದ್ಯೆಯಲ್ಲಿ ನಿಪುಣನಾಗಿದ್ದನು ಮತ್ತು ವಿದುರನು ವಿದ್ಯೆ, ರಾಜಕೀಯ ಮತ್ತು ರಾಜನೀತಿಯ ಎಲ್ಲಾ ಭಾಗಗಳನ್ನು ಓದಿ ಕಲಿತಿದ್ದನು.

ರಾಜಕುಮಾರರು ಬೆಳೆಯುತ್ತಿದ್ದಹಾಗೆ, ಹಸ್ತಿನಾಪುರದ ಖಾಲಿ ಸಿಂಹಾಸನವನ್ನು ತುಂಬುವ ಸಮಯ ಬಂದಿತು. ಅಂಧ ರಾಜಕುಮಾರನನ್ನು ರಾಜನಾಗಲು ಕಾನೂನುಗಳು ಅನುವು ಮಾಡಕೊಡದ ಕಾರಣ ಹಿರಿಯನಾದ ಧೃತರಾಷ್ಟ್ರನನ್ನು ನಿರ್ಲಕ್ಷಿಸಲಾಯಿತು. ಬದಲಿಗೆ ಪಾಂಡುವಿಗೆ ಪಟ್ಟಾಭಿಷೇಕ ಮಾಡಲಾಯಿತು. ಭೀಷ್ಮನು ಧೃತರಾಷ್ಟ್ರನ ಮದುವೆಯನ್ನು ಗಾಂಧಾರಿಯೊಂದಿಗೆ ಮತ್ತು ಪಾಂಡುವಿನ ಮದುವೆಯನ್ನು ಕುಂತಿ ಮತ್ತು ಮಾದ್ರಿಯೊಂದಿಗೆ ಮಾಡುವ ಮಾತುಕತೆಗಳನ್ನು ನಡೆಸಿ ಈ ವಿವಾಹಗಳನ್ನು ನೆರವೇರಿಸಿದನು. ನಂತರ ಪಾಂಡು ಸುತ್ತಮುತ್ತಲಿನ ಪ್ರದೇಶಗಳನ್ನು ವಶಪಡಿಸಿಕೊಂಡು ರಾಜ್ಯವನ್ನು ವಿಸ್ತರಿಸಿದನು ಮತ್ತು ಸಾಕಷ್ಟು ಯುದ್ಧ ಲೂಟಿಯನ್ನು ಹಸ್ತಿನಪುರಕ್ಕೆ ತಂದನು. ದೇಶದ ಆಡಳಿತ ಹೀಗೆ ಸುಗಮವಾಗಿ ನಡೆಯುತ್ತಿದ್ದಾಗ ಮತ್ತು ಅದರ ಖಜಾನೆಗಳು ತುಂಬಿದ್ದರಿಂದ, ಪಾಂಡು ತನ್ನ ಅಣ್ಣ ಧೃತರಾಷ್ಟ್ರನನ್ನು ರಾಜ್ಯ ವ್ಯವಹಾರಗಳನ್ನು ನೋಡಿಕೊಳ್ಳಲು ಕೇಳಿಕೊಂಡನು ಮತ್ತು ಸ್ವಲ್ಪ ಸಮಯದವರೆಗೆ ತನ್ನ ಇಬ್ಬರು ಹೆಂಡತಿಯರೊಂದಿಗೆ ಅರಣ್ಯಕ್ಕೆ ಹೋದನು.

ಕೌರವರು ಮತ್ತು ಪಾಂಡವರು

ಕೆಲವು ವರ್ಷಗಳ ನಂತರ, ಅರಣ್ಯದಲ್ಲಿ ಪಾಂಡುವಿಗೆ ಕುಂತಿ ಮತ್ತು ಮಾದ್ರಿಯರಿಂದ ದೇವತೆಗಳ ನಿಯೋಗ ಪದ್ಧತಿಯ ಮೂಲಕ ಐದು ಪುತ್ರರ ಜನ್ಮವಾಯಿತು. ಹಿರಿಯ ಪುತ್ರ ಧರ್ಮನಿಂದ, ಎರಡನೆಯವನು ವಾಯುದೇವರಿಂದ, ಮೂರನೆಯವನು ಇಂದ್ರನಿಂದ, ಮತ್ತು ಕಿರಿಯವರು - ಜವಳಿಯರು - ಅಶ್ವಿನಿದೇವತೆಗಳಿಂದ ಜನಿಸಿದರು. ಇದಾದ ಸ್ವಲ್ಪ ವರ್ಷಗಳಲ್ಲಿ ಪಾಂಡು ಮತ್ತು ಮಾದ್ರಿಯರ ಮೃತ್ಯುವಾಯಿತು. ಕುಂತಿ, ಪಾಂಡು ಮತ್ತು ಮಾದ್ರಿಯ ಮೃತ ದೇಹಗಳು ಮತ್ತು ಐದು ಚಿಕ್ಕ ಮಕ್ಕಳ ಜೊತೆಗೆ ಹಸ್ತಿನಾಪುರಕ್ಕೆ ಮರಳಿದಳು. ಈ ಮಧ್ಯೆ, ಧೃತರಾಷ್ಟ್ರ ಮತ್ತು ಗಾಂಧಾರಿಗೂ ತಮ್ಮ ಸ್ವಂತ ಮಕ್ಕಳಾಗಿದ್ದರು: 100 ಪುತ್ರರು ಮತ್ತು ಒಬ್ಬ ಪುತ್ರಿ. ಕುರು ಹಿರಿಯರು ಪಾಂಡು ಮತ್ತು ಮಾದ್ರಿಯರ ಅಂತಿಮ ಸಂಸ್ಕಾರಗಳನ್ನು ನೆರವೇರಿಸಿ, ಕುಂತಿ ಮತ್ತು ಮಕ್ಕಳನ್ನು ಅರಮನೆಗೆ ಬರಮಾಡಿಕೊಂಡರು.

Pandavas
ಪಾಂಡವರು Bob King (CC BY)

ರಾಜಕುಮಾರರು ಬೆಳೆಯುತ್ತಿದ್ದಂತೆ ,105 ರಾಜಕುಮಾರರನ್ನೂ ಕೃಪ ಎಂಬ ಒಬ್ಬ ಗುರುವಿನ ಆರೈಕೆಗೆ ಒಪ್ಪಿಸಲಾಯಿತು. ನಂತರ ಕೃಪರ ಜೊತೆಗೆ ದ್ರೋಣರೆಂಬ ಗುರುಗಳನ್ನೂ ನೇಮಿಸಲಾಯಿತು. ಹಸ್ತಿನಾಪುರದಲ್ಲಿ ದ್ರೋಣರ ಶಾಲೆಯು ಹಲವಾರು ಇತರ ಹುಡುಗರನ್ನು ಆಕರ್ಷಿಸಿತು; ಸೂತ ಕುಲದ ಕರ್ಣನು ಅದರಲ್ಲಿ ಒಬ್ಬ . ಧೃತರಾಷ್ಟ್ರನ ಪುತ್ರರು - 'ಕೌರವರು' ( ಅವರ ಪೂರ್ವಜ ಕುರುವಿನ ಪೋಷಕ ಹೆಸರು) ಮತ್ತು ಪಾಂಡುವಿನ ಪುತ್ರರು- 'ಪಾಂಡವರು' (ಅವರ ತಂದೆಯ ಪೋಷಕ ಹೆಸರು) ಇವರ ನಡುವೆ ಹಗೆತನವು ತ್ವರಿತವಾಗಿ ಬೆಳೆಯಿತು.

ಕೌರವರಲ್ಲಿ ಹಿರಿಯನಾದ ದುರ್ಯೋಧನನು ಎರಡನೇ ಪಾಂಡವ ಭೀಮನಿಗೆ ವಿಷ ನೀಡಲು ಪ್ರಯತ್ನಿಸಿ ವಿಫಲನಾದನು. ಮೂರನೇ ಪಾಂಡವ ಅರ್ಜುನನೊಂದಿಗಿನ ಬಿಲ್ಲುಗಾರಿಕೆಯಲ್ಲಿನ ಪೈಪೋಟಿಯಿಂದಾಗಿ ಕರ್ಣನು ದುರ್ಯೋಧನನೊಂದಿಗೆ ಮೈತ್ರಿ ಮಾಡಿಕೊಂಡನು. ರಾಜಕುಮಾರರು ತಮ್ಮ ಶಿಕ್ಷಕರಿಂದ ಸಾಧ್ಯವಾದ ಎಲ್ಲವನ್ನೂ ಕಲಿತ ನಂತರ ಕುರು ಹಿರಿಯರು ರಾಜಕುಮಾರರ ಸಾರ್ವಜನಿಕ ಕೌಶಲ್ಯ ಪ್ರದರ್ಶನವನ್ನು ನಡೆಸಲು ನಿರ್ಧರಿಸಿದರು. ಈ ಪ್ರದರ್ಶನದ ಸಮಯದಲ್ಲಿ ನಾಗರಿಕರು ರಾಜಮನೆತನಗಳ ನಡುವಿನ ಹಗೆತನದ ಬಗ್ಗೆ ಸ್ಪಷ್ಟವಾಗಿ ಅರಿತುಕೊಂಡರು: ದುರ್ಯೋಧನ ಮತ್ತು ಭೀಮರ ಗದಾಯುದ್ಧವು ಅತಿರೇಕಕ್ಕೆ ಹೋಗುವ ಮೊದಲು ನಿಲ್ಲಿಸಬೇಕಾಯಿತು. ಕರ್ಣನು ರಾಜಕುಮಾರನಲ್ಲದ ಕಾರಣ ಆಹ್ವಾನಿಸದೆ ಈ ಪ್ರದರ್ಶನಕ್ಕೆ ಬಂದಿದ್ದನ್ನು ಅರ್ಜುನನನ್ನು ಪ್ರಶ್ನಿಸಿದನು. ಅವನ ರಾಜೇತರ ಜನನದ ಕಾರಣದಿಂದಾಗಿ ಅವಮಾನಿಸಲ್ಪಟ್ಟನು. ಇದನ್ನು ನೋಡಿದ ದುರ್ಯೋಧನನು ಸ್ಥಳದಲ್ಲೇ ಕರ್ಣನನ್ನು ಒಂದು ಸಾಮಂತ ರಾಜ್ಯದ ರಾಜನಾಗಿ ಪಟ್ಟಾಭಿಷೇಕ ಮಾಡಿದನು. ಈ ಸಮಯದಲ್ಲಿಯೇ ಧೃತರಾಷ್ಟ್ರ ಸಿಂಹಾಸನವನ್ನು ಮತ್ತು ರಾಜ್ಯಭಾರವನ್ನು ಅನೈತಿಕವಾಗಿ ಮುಂದುವರೆಸುತ್ತಿದ್ದಾನೆ ಎಂಬ ಪ್ರಶ್ನೆಗಳು ಹುಟ್ಟಲು ಪ್ರಾರಂಭಿಸಿದವು. ಕಿರೀಟಧಾರಿ ರಾಜ ಪಾಂಡುವಿನ ಅನುಪಸ್ಥಿತಿಯಲ್ಲಿ ಮಾತ್ರ ಅದನ್ನು ಅವನಿಗೆ ವಹಿಸಿದ್ದಿದು. ಇದು ಅನೈತಿಕವಾಗಿದ್ದರಿಂದ ಜನರಲ್ಲಿ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು ಮತ್ತು ರಾಜ್ಯದಲ್ಲಿ ಶಾಂತಿಯನ್ನು ಕಾಪಾಡಲು, ಧೃತರಾಷ್ಟ್ರನು ಹಿರಿಯ ಪಾಂಡವ ಯುಧಿಷ್ಠಿರನನ್ನು ಯುವರಾಜ ಮತ್ತು ಉತ್ತರಾಧಿಕಾರಿ ಎಂದು ಘೋಷಿಸಿದನು.

The Kuru Family Tree
ಕುರು ವಂಶವೃಕ್ಷ Anindita Basu (CC BY-NC-SA)

ಮೊದಲ ವನವಾಸ

ಯುವರಾಜ ಯುಧಿಷ್ಠಿರನ ಜನಪ್ರಿಯತೆ ನಾಗರಿಕರಲ್ಲಿ ಹೆಚ್ಚುತ್ತಿರುವುದು ದುರ್ಯೋಧನನಿಗೆ ಅತ್ಯಂತ ಅಸಹನೀಯವಾಗಿತ್ತು. ಅವನ ತಂದೆ ವಾಸ್ತವಿಕ ರಾಜನಾಗಿದ್ದರಿಂದ ಅವನು ತಾನೇ ಸರಿಯಾದ ಉತ್ತರಾಧಿಕಾರಿ ಎಂದು ಭಾವಿಸಿದ್ದನು. ಪಾಂಡವರನ್ನು ತೊಡೆದುಹಾಕಲು ಅವನು ಒಂದು ಸಂಚನ್ನು ರೂಪಿಸಿದನು. ಹತ್ತಿರದ ಒಂದು ಪಟ್ಟಣದಲ್ಲಿ ಆಗರ(ಮೇಣದ) ಅರಮನೆಯನ್ನು ಕಟ್ಟಿಸಿ ಪಾಂಡವರನ್ನು ಹೇಗಾದರೂ ಅಲ್ಲಿರುವಂತೆ ಮಾಡಿ ಆ ಅರಮನೆಯನ್ನು ಬೆಂಕಿ ಹಾಕಿ ಅರಮನೆಯ ಜೊತೆ ಪಾಂಡವರನ್ನೂ ಸುಟ್ಟು ಹಾಕುವ ಯೋಜನೆಯನ್ನು ತನ್ನ ಒಬ್ಬ ಸ್ನೇಹಿತನ ಜೊತೆಯಲ್ಲಿ ಮಾಡಿದನು. ಅರಮನೆ ಕಟ್ಟಿ ಸ್ವಲ್ಪ ದಿನಗಳಲ್ಲಿಯೇ ಆ ಪಟ್ಟಣದಲ್ಲಿ ಒಂದು ಜಾತ್ರೆಯು ಪ್ರಾರಂಭವಾಯಿತು. ಇದೇ ಸಮಯದಲ್ಲಿ ದುರ್ಯೋಧನನು ತನ್ನ ತಂದೆಗೆ ಹೇಳಿ ಕುಂತಿ ಮತ್ತು ಪಾಂಡವರನ್ನು ಆ ಜಾತ್ರೆಗೆ ಕಳಿಸುವಂತೆ ಮಾಡುವುದರಲ್ಲಿ ಸಫಲನದನು. ಆದರೆ ಈ ವಿಷಯವೆಲ್ಲವೂ ಪಾಂಡವರಿಗೆ ಅವರ ಇನ್ನೊಬ್ಬ ಚಿಕ್ಕಪ್ಪ ವಿದುರನಿಂದ ತಿಳಿಯಲ್ಪಟ್ಟಿತು. ಪಾಂಡವರೂ ಕೂಡ ತಮ್ಮ ಪ್ರತಿ ಯೋಜನೆಯನ್ನು ಸಿದ್ದ ಪಡಿಸಿಕೊಂಡರು. ಅವರು ತಮ್ಮ ತಮ್ಮ ಕೋಣೆಗಳ ಕೆಳಗೆ ಸುರಂಗವನ್ನು ಅಗೆದು ಅರಮನೆಯು ಬೆಂಕಿ ಹತ್ತಿ ಉರಿಯುವ ವೇಳೆಯಲ್ಲಿ ಈ ಸುರಂಗಗಳಿಂದ ತಪ್ಪಿಸಿಕೊಳ್ಳುವ ದಾರಿಯನ್ನು ಮಾಡಿಕೊಂಡರು. ಒಂದು ರಾತ್ರಿ, ಪಾಂಡವರು ಒಂದು ದೊಡ್ಡ ಔತಣವನ್ನು ಏರ್ಪಡಿಸಿ ಪಟ್ಟಣ್ಣದ ಎಲ್ಲಾ ಜನರನ್ನು ಆಹ್ವಾನಿಸಿದರು. ಆ ಔತಣಕೂಟದಲ್ಲಿ, ಒಬ್ಬ ಅರಣ್ಯದ ಮಹಿಳೆ ಮತ್ತು ಅವಳ ಐದು ಗಂಡು ಮಕ್ಕಳು ನಿಯಂತ್ರಣವಿಲ್ಲದೆ ತಿಂದು ಮತ್ತು ಕುಡಿದು ನೆಲದ ಮೇಲೆ ಪ್ರಜ್ಞೆ ತಪ್ಪಿದರು; ಪಾಂಡವರು ಔತಣಕೂಟ ಮುಗಿದ ಮೇಲೆ, ಆ ರಾತ್ರಿಯೇ ತಾವೇ ಅರಮನೆಗೆ ಬೆಂಕಿ ಹಚ್ಚಿ ಸುರಂಗದ ಮೂಲಕ ತಪ್ಪಿಸಿಕೊಂಡರು. ಜ್ವಾಲೆಗಳು ನಿಂತಾಗ, ಆ ಊರಿನ ಜನರು ಅರಣ್ಯದ ಮಹಿಳೆ ಮತ್ತು ಅವಳ ಗಂಡು ಮಕ್ಕಳ ಮೂಳೆಗಳನ್ನು ಕುಂತಿ ಮತ್ತು ಪಾಂಡವರು ಎಂದು ತಪ್ಪಾಗಿ ಭಾವಿಸಿ, ಈ ವಿಷಯವನ್ನು ರಾಜಮನೆತನಕ್ಕೆ ತಲುಪಿಸಿದರು. ದುರ್ಯೋಧನನು ತನ್ನ ಯೋಜನೆ ಯಶಸ್ವಿಯಾಯಿತು ಮತ್ತು ಕುಂತಿ ಮತ್ತು ಪಾಂಡವರು ಬೆಂಕಿಯಲ್ಲಿ ದಹನವಾಗಿ ಹೋದರು ಎಂದು ಭಾವಿಸಿದನು.

ಅರ್ಜುನ ಮತ್ತು ದ್ರೌಪದಿ

ಈ ಮಧ್ಯೆ, ಪಾಂಡವರು ಮತ್ತು ಕುಂತಿ ಬಡಬ್ರಾಹ್ಮಣರ ಕುಟುಂಬದಂತೆ ತಲೆಮರೆಸಿಕೊಂಡು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತಿದ್ದರು. ಒಂದೊಂದು ಊರಿನಲ್ಲು ಅವರು ಒಬ್ಬ ಹಳ್ಳಿಗರ ಅಥವಾ ನಗರವಾಸಿಯ ಮನೆಯಲ್ಲಿ ಕೆಲವು ವಾರಗಳ ಕಾಲ ಆಶ್ರಯ ಪಡೆಯುತ್ತಿದ್ದರು. ರಾಜಕುಮಾರರು ಬ್ರಾಹ್ಮಣರ ವೇಷದಲ್ಲಿ ಪ್ರತಿದಿನ ಆಹಾರಕ್ಕಾಗಿ ಭಿಕ್ಷೆ ಬೇಡಲು ಹೋಗುತ್ತಿದ್ದರು ಮತ್ತು ಸಂಜೆಯ ಹೊತ್ತಿಗೆ ಭಿಕ್ಷೆಯನ್ನು ಮನೆಗೆ ತಂದು ಆಹಾರವನ್ನು ಎರಡು ಭಾಗಗಳಾಗಿ ವಿಂಗಡಿಸುತ್ತಿದ್ದರು: ಒಂದು ಅರ್ಧ ಬಲಿಷ್ಠ ಭೀಮನಿಗೆ ಮತ್ತು ಇನ್ನರ್ಧವನ್ನು ಇತರರು ಹಂಚಿಕೊಳ್ಳುತ್ತಿದ್ದರು. ಈ ದಿನಗಳಲ್ಲಿ ಭೀಮನು ಇಬ್ಬರು ರಾಕ್ಷಸರನ್ನು ಕೊಂದು, ಒಬ್ಬ ರಾಕ್ಷಸಿಯನ್ನು ಮದುವೆಯಾದನು ಮತ್ತು ಘಟೋತ್ಕಚ ಎಂಬ ರಾಕ್ಷಸ ಮಗುವನ್ನು ಪಡೆದನು. ಈ ಸಂದರ್ಭದಲ್ಲಿ ಅವರು ಪಾಂಚಾಲ ರಾಜಕುಮಾರಿಗೆ ಸ್ವಯಂವರ (ವರನನ್ನು ಆಯ್ಕೆ ಮಾಡುವ ಸಮಾರಂಭ) ಆಯೋಜಿಸಲಾಗುತ್ತಿದೆ ಎಂದು ಕೇಳಿದರು ಮತ್ತು ಈ ಸಮಾರಂಭವನ್ನು ನೋಡಲು ಕುಂತಿಯನ್ನು ಮನೆಯಲ್ಲಿಯೇ ಬಿಟ್ಟು ಪಾಂಚಾಲ ರಾಜಸಭಾಂಗಣವನ್ನು ತಲುಪಿದರು. ಅಲ್ಲಿ ರಾಜನು ಭಿಕ್ಷೆ ಬೇಡುವವರಿಗೆ ಅತ್ಯಂತ ಉದಾರವಾಗಿ ವಸ್ತುಗಳನ್ನು ದಾನವಾಗಿ ನೀಡುತ್ತಿದ್ದನು. ರಾಜಕುಮಾರಿ ದ್ರೌಪದಿಯು ಅತ್ಯಂತ ರೂಪವತಿಯಾಗಿದ್ದಳು. ಸ್ವಯಂವರಕ್ಕೆ ಬಹು ದೂರದ ದೇಶಗಳ ರಾಜಕುಮಾರರು ಬಂದಿದ್ದರು. ಪ್ರತಿಯೊಬ್ಬರಿಗೂ ಸ್ವಯಂವರದ ಸ್ಪರ್ಧೆಯನ್ನು ಗೆದ್ದು, ರಾಜಕುಮಾರಿಯನ್ನು ವರಿಸುವ ಆಶಯ. ಆದರೆ, ಸ್ಪರ್ಧೆಯು ಬಹಳ ಕಠಿಣವಾಗಿದ್ದಿತು. ಅದೇನೆಂದರೆ, ಉದ್ದವಾದ ಕಂಬದ ಮೇಲ್ಭಾಗದಲ್ಲಿ ಸುತ್ತುತ್ತಿರುವ ಚಕ್ರದಲ್ಲಿ ಒಂದು ಮೀನನ್ನು ಕಟ್ಟಲಾಗಿತ್ತು . ಕಂಬದ ಕೆಳಭಾಗದಲ್ಲಿ ನೀರಿನ ಆಳವಿಲ್ಲದ ಪಾತ್ರೆ ಇತ್ತು. ಸ್ಪರ್ಧಿಯು ಮೇಲೆ ನೋಡದೆಯೇ , ಈ ನೀರಿನ ಪ್ರತಿಬಿಂಬದ ಸಹಾಯದಿಂದ ಮಾತ್ರ , ಬಿಲ್ಲು ಮತ್ತು ಬಾಣದಿಂದ ತಿರುಗುತ್ತಿರುವ ಮೀನನ್ನು ಐದು ಪ್ರಯತ್ನಗಳ ಒಳಗೆ ಗುರಿಯಿಟ್ಟು ಹೊಡೆದು ಚುಚ್ಚಬೇಕು. ಇದು ಅತ್ಯಂತ ನುರಿತ (ಈಗ ಸತ್ತಿದ್ದಾನೆಂದು ಭಾವಿಸಲಾದ ಅರ್ಜುನನಂತಹ) ಬಿಲ್ಲುಗಾರನಿಗೆ ಮಾತ್ರ ಸಾಧ್ಯ ಎಂದು ಎಲ್ಲರಿಗೂ ತಿಳಿದ ವಿಷಯವಾಗಿತ್ತು.

Arjuna at the Draupadi Swayamvar
ದ್ರೌಪದಿ ಸ್ವಯಂವರದಲ್ಲಿ ಅರ್ಜುನ Charles Haynes (CC BY-SA)

ಒಬ್ಬೊಬ್ಬರಾಗಿ, ರಾಜರು ಮತ್ತು ರಾಜಕುಮಾರರು ಮೀನನ್ನು ಹೊಡೆಯಲು ಪ್ರಯತ್ನಿಸಿ ವಿಫಲರಾದರು. ಕೆಲವರಿಗೆ ಬಿಲ್ಲು ಎತ್ತಲು ಸಹ ಸಾಧ್ಯವಾಗಲಿಲ್ಲ. ಮತ್ತೆ ಕೆಲವರಿಗೆ ಬಾಣವನ್ನು ಬಿಲ್ಲಿನ ಹಗ್ಗಕ್ಕೆ ಸೇರಿಸಲು ಕೂಡ ಸಾಧ್ಯವಾಗಲಿಲ್ಲ. ಕೌರವರು ಜೊತೆಗೆ ಕರ್ಣನೂ ಕೂಡ ಸ್ವಯಂವರಕ್ಕೆ ಬಂದಿದ್ದನು. ಕರ್ಣನ ಬಾರಿ ಬಂದಾಗ, ಅವನು ಬಿಲ್ಲನ್ನು ಎತ್ತಿಕೊಂಡು ಒಂದು ಕ್ಷಣದಲ್ಲಿ ಬಾಣವನ್ನು ಕಟ್ಟಿ ಇನ್ನೇನು ಗುರಿಯನ್ನು ಇಡುವಾಗ, ದ್ರೌಪದಿ ಸೂತ ಕುಲದ ಯಾರನ್ನೂ ಮದುವೆಯಾಗುವುದಿಲ್ಲ ಎಂದು ಘೋಷಿಸಿದಳು. ಕರ್ಣನು ನಿರಾಶನಾಗಿ ಸ್ಪರ್ಧೆಯಿಂದ ಹೊರಬಂದನು. ಹೀಗೆ ಕೌರವರೂ ಸೇರಿ ಎಲ್ಲಾ ರಾಜಕುಮಾರಾರೂ ವಿಫಲವಾದ ನಂತರ, ಈಗ ಮೂರನೆಯ ಪಾಂಡವ ಅರ್ಜುನನ ಸರದಿ. ಆರ್ಜುನನು ಬಹಳ ಸುಲಭವಾಗಿ ಬಿಲ್ಲನ್ನು ಎತ್ತಿ, ಐದು ಬಾಣಗಳನ್ನು ಬಿಲ್ಲಿಗೆ ಜೋಡಿಸಿ, ನೀರಿನೊಳಗೆ ಮೀನಿನ ಪ್ರತಿಬಂಬವನ್ನು ಗಮನಿಸಿ ಗುರಿಯಿಟ್ಟು ಒಂದೇ ಪ್ರಯತ್ನದಲ್ಲಿ ಎಲ್ಲಾ ಐದು ಬಾಣಗಳಿಂದ ಮೇಲೆ ಚಕ್ರದಲ್ಲಿ ತಿರುಗುತ್ತಿರುವ ಮೀನಿನ ಕಣ್ಣಿಗೆ ಹೊಡೆದನು. ಈ ರೀತಿ ಆರ್ಜುನನು ಸ್ವಯಂವರದಲ್ಲಿ ದ್ರೌಪದಿಯನ್ನು ಗೆದ್ದನು.

ಇನ್ನೂ ಬಡ ಬ್ರಾಹ್ಮಣರ ವೇಷದಲ್ಲಿದ್ದ ಪಾಂಡವ ಸಹೋದರರು ದ್ರೌಪದಿಯನ್ನು ತಾವು ವಾಸಿಸುತ್ತಿದ್ದ ಗುಡಿಸಲಿಗೆ ಕರೆದೊಯ್ದು "ಅಮ್ಮಾ, ಬನ್ನಿ ನಾವು ಇಂದು ಏನನ್ನು ತಂದಿದ್ದೇವೆ ಎಂದು ನೋಡಿ." ಎಂದು ಕುಂತಿಯನ್ನು ಕೂಗಿ ಕರೆದರು. ಕುಂತಿ, ಮಕ್ಕಳು ಎಂದಿನಂತೆ ಭಿಕ್ಷೆಯನ್ನು ತಂದಿದ್ದಾರೆಂದು ಅಂದುಕೊಂಡು "ಅದು ಏನೇ ಇರಲಿ, ಅದನ್ನು ನಿಮ್ಮಲ್ಲಿ ಹಂಚಿಕೊಳ್ಳಿ" ಎಂದು ಹೇಳಿ ಗುಡಿಸಲಿನಿಂದ ಹೊರಬಂದಳು. ಆದರೆ ಅದು ಭಿಕ್ಷೆಯಲ್ಲ ಬದಲಾಗಿ ಆ ವಸ್ತುವು ತಾನು ಇಲ್ಲಿಯವರೆಗೂ ನೋಡಿರದ ಅತ್ಯಂತ ಸುಂದರ ಮಹಿಳೆಯಾಗಿದ್ದಳು. ತಾನು ಈಗ ತಾನೇ ಹೇಳಿದ ಮಾತಿನ ಮಹತ್ವ ಮತ್ತು ಅದರ ಅರ್ಥ ಎಲ್ಲರಿಗೆ ಅರಿವಾಗುತ್ತಿದ್ದಂತೆ ಕುಂತಿಯು ಸ್ವಲ್ಪ ಆಗಾಥದಿಂದ ಸ್ತಬ್ಧಳಾದಳು.

ಏತನ್ಮಧ್ಯೆ, ದ್ರೌಪದಿಯ ಅವಳಿ ಸಹೋದರ ಧೃಷ್ಟದ್ಯುಮ್ನನು ತನ್ನ ರಾಜ ಸಹೋದರಿಯನ್ನು ಬಡ ಸಾಮಾನ್ಯ ಬ್ರಾಹ್ಮಣನಿಗೆ ಮದುವೆ ಮಾಡಿಸಿದ ಬಗ್ಗೆ ಅತೃಪ್ತಿಗೊಂಡು, ಪಾಂಡವರನ್ನು ಅವರಿಗೆ ತಿಳಿಯದ ಹಾಗೆ ಅವರ ಗುಡಿಸಲಿಗೆ ಹಿಂಬಾಲಿಸುತ್ತಾನೆ. ಯಾದವ ಕುಲದ ರಾಜಸಹೋದರರಾದ ನೀಲವರ್ಣದ ಕೃಷ್ಣ ಮತ್ತು ಗೋಧಿ ಮೈಬಣ್ಣದ ಬಲರಾಮರೂ ಕೂಡ ರಹಸ್ಯವಾಗಿ ಇವರನ್ನು ಹಿಂಬಾಲಿಸುತ್ತಾರೆ. ಈ ರಾಜಕುಮಾರರು ಪಾಂಡವರಿಗೆ ಸಂಬಂಧಿಯಾಗಬೇಕು - ಕೃಷ್ಣ ಬಲರಾಮರ ತಂದೆ ಕುಂತಿಯ ಸಹೋದರ. ಆದರೆ ಅವರು ಹಿಂದೆಂದೂ ಭೇಟಿಯಾಗಿರಲಿಲ್ಲ. ಕೃಷ್ಣ ಬಲರಾಮರಿಗೆ ಆ ಬ್ರಾಹ್ಮಣ ವೇಷದ ಬಿಲ್ಲುಗಾರ ಅರ್ಜುನನಲ್ಲದೆ ಬೇರೆ ಯಾರೂ ಅಲ್ಲವೆಂದೂ ಮತ್ತು ಕೆಲವು ತಿಂಗಳ ಹಿಂದೆ ಅರಮನೆ ಸುಟ್ಟ ಘಟನೆಯಲ್ಲಿ ಪಾಂಡವರು ಹೇಗೋ ತಪ್ಪಿಸಿಕೊಂಡಿದ್ದಾರೆಂದು ಅನುಮಾನವಿರುತ್ತದೆ. ಆಕಸ್ಮಿಕವಾಗಿ, ಕಾಕತಾಳಿಯವೆಂಬಂತೆ , ವ್ಯಾಸ ಕೂಡ ಈ ಹಂತದಲ್ಲಿ ಇವರೆಲ್ಲರ ಜೊತೆ ಪಾಂಡವರ ಗುಡಿಸಲಿಗೆ ಬರುತ್ತಾರೆ. ಈ ಪುನರ್ಮಿಲನ ಎಲ್ಲರಿಗೂ ಸಂತೋಷ ಹಾಗೂ ಉತ್ಸಾಹ ತರುತ್ತದೆ. ಕುಂತಿಯ ಮಾತುಗಳನ್ನು ಉಳಿಸಿಕೊಳ್ಳಲು, ದ್ರೌಪದಿ ಐದು ಪಾಂಡವರೆಲ್ಲರಿಗೂ ಪತ್ನಿಯಾಗುತ್ತಾಳೆ ಎಂದು ನಿರ್ಧರಿಸಲಾಗುತ್ತದೆ. ಈ ಅಸಾಧಾರಣ ಮತ್ತು ವಿಚಿತ್ರ ವ್ಯವಸ್ಥೆಗೆ ಅವಳ ಸಹೋದರ ಧೃಷ್ಟದ್ಯುಮ್ನ ಮತ್ತು ತಂದೆ ರಾಜ ದ್ರುಪದ ಮೊದಲು ಒಪ್ಪದಿದ್ದರೂ, ವ್ಯಾಸ ಮತ್ತು ಯುಧಿಷ್ಠಿರರು ಮನವರಿಕೆ ಮಾಡಿ ಒಪ್ಪಿಸುತ್ತಾರೆ.

Places in the Mahabharata
ಮಹಾಭಾರತದ ಸ್ಥಳಗಳು Anindita Basu (CC BY-NC-SA)

ಇಂದ್ರಪ್ರಸ್ಥ ಮತ್ತು ಪಗಡೆ ಆಟ

ಪಾಂಚಾಲದಲ್ಲಿ ವಿವಾಹ ಸಮಾರಂಭಗಳು ಮುಗಿದ ನಂತರ, ಹಸ್ತಿನಾಪುರ ಅರಮನೆಯು ಪಾಂಡವರು ಮತ್ತು ಅವರ ವಧುವನ್ನು ಮತ್ತೆ ಬರಮಾಡಿಕೊಂಡಿತು. ಪಾಂಡವರು ಜೀವಂತವಾಗಿದ್ದಾರೆಂದು ತಿಳಿದು ಧೃತರಾಷ್ಟ್ರನು ಸಂತೋಷದ ಮಹಾ ಪ್ರದರ್ಶನ ಮಾಡಿದನು. ಅವನು ರಾಜ್ಯವನ್ನು ವಿಭಜಿಸಿ, ಅವರಿಗೆ ಒಂದು ದೊಡ್ಡ ಬಂಜರು ಭೂಮಿ ಇರುವ ಪ್ರದೇಶವನ್ನುನೆಲೆಸಲು ಮತ್ತು ಆಳಲು ನೀಡಿದನು. ಯುಧಿಷ್ಠಿರನನ್ನು ಆ ರಾಜ್ಯದ ರಾಜನನ್ನಾಗಿ ಪಟ್ಟಾಭಿಷೇಕ ಮಾಡಲಾಯಿತು. ಪಾಂಡವರು ಈ ಪ್ರದೇಶವನ್ನು ಸ್ವಲ್ಪ ಕಾಲದಲ್ಲಿಯೇ ಸ್ವರ್ಗದ ನಾಡನ್ನಾಗಿ ಪರಿವರ್ತಿಸಿದರು. ಯುಧಿಷ್ಠಿರನು, ದೇಶದ ಎಲ್ಲಾ ರಾಜರು - ಸ್ವಯಂಪ್ರೇರಣೆಯಿಂದ ಅಥವಾ ಬಲವಂತದಿಂದ - ಅವನ ಆಳ್ವಿಕೆಯನ್ನು ಸ್ವೀಕರಿಸಲು ಒಂದು ಯಜ್ಞವನ್ನು ಕೈಗೊಂಡನು. ಹೊಸ ರಾಜ್ಯವಾದ ಇಂದ್ರಪ್ರಸ್ಥವು ಸಮೃದ್ಧವಾಗಿ ಬೆಳೆಯಿತು.

ಹೀಗಿರುವಾಗ, ಪಾಂಡವರು ದ್ರೌಪದಿಯ ಜೊತೆ ಸಂಸಾರ ಮಾಡುವ ರೀತಿಯ ಬಗ್ಗೆ ತಮ್ಮೊಳಗೆ ಒಂದು ಒಪ್ಪಂದ ಹಾಗೂ ವ್ಯವಸ್ತೆ ಮಾಡಿಕೊಂಡಿದ್ದರು. ಅದೇನೆಂದರೆ, ಅವಳು ಪ್ರತಿ ಪಾಂಡವನಿಗೆ ಒಂದು ವರ್ಷ ಪತ್ನಿಯಾಗಿರಬೇಕಿತ್ತು. ಯಾವುದೇ ಪಾಂಡವ ತನ್ನ ಆ ವರ್ಷದ ಪತಿಯೊಂದಿಗೆ ಅವಳು ಇರುವ ಕೋಣೆಗೆ ಪ್ರವೇಶಿಸಿದರೆ, ಆ ಪಾಂಡವನು 12 ವರ್ಷಗಳ ಕಾಲ ಗಡಿಪಾರು ಆಗುವ ಒಂದು ನಿಯಮವನ್ನು. ಒಮ್ಮೆ ಅರ್ಜುನನು ಬಿಲ್ಲು ಮತ್ತು ಬಾಣಗಳನ್ನು ತೆಗೆದುಕೊಳ್ಳಲು ಶಸ್ತ್ರಾಗಾರಕ್ಕೆ ಪ್ರವೇಶಿಸಿದಾಗ ದ್ರೌಪದಿ ಮತ್ತು ಆ ವರ್ಷದ ಅವಳ ಪತಿ ಯುಧಿಷ್ಠಿರನು ಅಲ್ಲಿದ್ದರು. ಉಲ್ಲಂಘನೆ ಮುರಿದ ಕಾರಣ ತಾವು ಹಾಕಿಕೊಂಡ ನಿಯಮದ ಪ್ರಕಾರ ಅರ್ಜುನನು ಇಂದ್ರಪಸ್ಥ ಬಿಟ್ಟು ಹೋಗಬೇಕಾಯಿತು. ಆ ಸಮಯದಲ್ಲಿ ಅವನು ಇಡೀ ದೇಶವನ್ನು, ಅದರ ದಕ್ಷಿಣ ತುದಿಯವರೆಗೆ ಪ್ರಯಾಣ ಮಾಡಿದನು. ಹೀಗೆ ದೇಶ ಪರ್ಯಟನೆ ಕಾಲದಲ್ಲಿ ಭೇಟಿಯಾದ ಮೂವರು ರಾಜಕುಮಾರಿಯರನ್ನು ಅವನು ಮದುವೆಯಾದನು.

ಇಂದ್ರಪ್ರಸ್ಥವನ್ನು ಸಮೃದ್ಧಿಯ ಕಡೆಗೆ ಒಯ್ಯುತ್ತಿದ್ದ ಪಾಂಡವರ ಸಫಲತೆ ಹಾಗೂ ಪಾಂಡವರ ಶಕ್ತಿ ದುರ್ಯೋಧನನಿಗೆ ಇಷ್ಟವಾಗಲಿಲ್ಲ. ಅವನು ಯುಧಿಷ್ಠಿರನನ್ನು ಪಗಡೆ ಆಟಕ್ಕೆ ಆಹ್ವಾನಿಸಿ ಚಿಕ್ಕಪ್ಪ ಶಕುನಿ ತನ್ನ (ದುರ್ಯೋಧನ) ಪರವಾಗಿ ಆಡುವಂತೆ ಮಾಡಿದನು. ಶಕುನಿ ಒಬ್ಬ ಕುಯುಕ್ತಿಯ ಮತ್ತು ನಿಪುಣ ಆಟಗಾರ; ಯುಧಿಷ್ಠಿರನು ತನ್ನ ಸಂಪೂರ್ಣ ಸಂಪತ್ತನ್ನು - ರಾಜ್ಯವನ್ನು, ಸಹೋದರರನ್ನು, ತನ್ನನ್ನು ಮತ್ತು ಕೊನೆಗೆ ದ್ರೌಪದಿಯನ್ನುಸಹ ಒಂದೊಂದಾಗಿ ಪಣಕ್ಕಿಟ್ಟು - ಕಳೆದುಕೊಂಡನು. ದ್ರೌಪದಿಯ ವಸ್ತ್ರಾಪಹರಣ ಪ್ರಯತ್ನ ನಡೆದು ಅವಳನ್ನು ಅವಮಾನಿಸಲಾಗುತ್ತದೆ. ಇದರಿಂದ ಕೋಪಗೊಂಡ ಭೀಮನು ಪ್ರತಿಯೊಬ್ಬ ಕೌರವನನ್ನೂ ಕೊಲ್ಲುವುದಾಗಿ ಪ್ರತಿಜ್ಞೆ ಮಾಡಿದನು. ವಿಷಯಗಳು ಎಷ್ಟು ಉದ್ವಿಗ್ನಗೊಂಡವೆಂದರೆ ಧೃತರಾಷ್ಟ್ರನು ಇಷ್ಟವಿಲ್ಲದೆ ಮಧ್ಯಪ್ರವೇಶಿಸಿ, ಅವರು ಕಳೆದುಕೊಂಡ ರಾಜ್ಯ, ಸಂಪತ್ತು ಮತ್ತು ದ್ರೌಪದಿಯನ್ನು ಪಾಂಡವರಿಗೆ ಹಿಂದಿರುಗಿಸಿ, ಅವರನ್ನು ಇಂದ್ರಪ್ರಸ್ಥಕ್ಕೆ ಕಳಿಸಿಕೊಡುತ್ತಾನೆ. ಇದರಿಂದ ವಿಪರೀತ ಕೋಪಗೊಂಡ ದುರ್ಯೋಧನನು, ತನ್ನ ತಂದೆಯೊಂದಿಗೆ ಮಾತನಾಡಿ ಪುನಃ ಯುಧಿಷ್ಠಿರನನ್ನು ಮತ್ತೊಂದು ಪಗಡೆ ಆಟಕ್ಕೆ ಆಹ್ವಾನಿಸಿದನು. ಈ ಬಾರಿಯ ನಿಯಮವೇನೆಂದರೆ, ಸೋತವರು 12 ವರ್ಷಗಳ ವನವಾಸವನ್ನು ನಂತರ ಒಂದು ವರ್ಷ ಅಜ್ಞಾತ ಜೀವನವನ್ನು ನಡೆಸಬೇಕೆಂಬುದು. ಈ ಅಜ್ಞಾತ ಅವಧಿಯಲ್ಲಿ ಯಾರದರೊ ಅವರನ್ನು ಗುರುತು ಹಿಡಿದರೆ ಸೋತವರು 12+1 ಚಕ್ರವನ್ನು ಪುನರಾವರ್ತಿಸಬೇಕಾಗುತ್ತದೆ. ಪಗಡೆ ದಾಳ ಆಟವನ್ನು ಮತ್ತೆ ಆಡಲಾಯಿತು ಹಾಗೂ ಯುಧಿಷ್ಠಿರನು ಈ ಬಾರಿಯೂ ಸೋತನು.

Draupadi Humiliated, Mahabharata
ದ್ರೌಪದಿಗೆ ಅಪಮಾನದ ಮಹಾಬಾರತ ಸಂದರ್ಭದಲ್ಲಿ Basholi School (Public Domain)

ಎರಡನೇ ವನವಾಸ

ಈ ಬಾರಿ ವೃದ್ಧ ತಾಯಿ ಕುಂತಿಯನ್ನು ವಿದುರನ ಜೊತೆ ಹಸ್ತಿನಾಪುರದಲ್ಲಿ ಬಿಟ್ಟು ಪಾಂಡವರು ವನವಾಸಕ್ಕೆ ಹೊರಟರು. ಕಾಡಿನಿಂದ ಕಾಡಿಗೆ ಓಡಾಡುತ್ತಾ ಅಲ್ಲಿಯೇ ತಾತ್ಕಾಲಿಕ ಗುಡಿಸಲು ಕಟ್ಟಿಕೊಂಡು, ಬೇಟೆ ಮಾಡಿ ಅಥವಾ ಅಲ್ಲಿಯೇ ಸಿಗುವ ಗಿಡ ಮೂಲಿಕೆಗಳನ್ನು ತಿಂದು ವಾಸ ಮಾಡುತ್ತಿದ್ದರು. ಈ ವರ್ಷಗಳಲ್ಲಿ ಅವರು ಅನೇಕ ಪವಿತ್ರ ಸ್ಥಳಗಳಿಗೆ ಭೇಟಿ ನೀಡುದರು. ಈ ಸಮಯದಲ್ಲಿ, ಯುಧಿಷ್ಠಿರನು ಅರ್ಜುನನನ್ನು ದೈವಿಕ ಆಯುಧಗಳನ್ನು ಪಡೆದುಕೊಂಡು ಬರಲು ದೇವಲೋಕಕ್ಕೆಹೋಗುವಂತೆ ಕೇಳಿಕೊಂಡನು. ಏಕೆಂದರೆ, ವನವಾಸದ ನಂತರ ಕೌರವರು ಅವರ ರಾಜ್ಯವನ್ನು ಪಾಂಡವರಿಗೆ ಶಾಂತಿಯುತವಾಗಿ ಹಿಂತಿರುಗಿಸುವುದಿಲ್ಲ ಎಂದು ಮನದಟ್ಟಾಗಿತ್ತು ಮತ್ತು ರಾಜ್ಯವನ್ನು ಪುನಃ ಪಡೆದುಕೊಳ್ಳಲು ಹೋರಾಡಬೇಕಾಗುತ್ತದೆ ಎಂಬುದು ಸ್ಪಷ್ಟವಾಗಿತ್ತು. ಈ ಹೋರಾಟಕ್ಕೆ ಶಕ್ತಿಯುತ ಯುದ್ಧ ಅಸ್ತ್ರಗಳ ಅವಶ್ಯಕತೆ ಇತ್ತು. ಈ ನಿಟ್ಟಿನಲ್ಲಿ ಅರ್ಜುನನು ದೇವರುಗಳಿಂದ ಹಲವಾರು ಆಯುಧಗಳ ತಂತ್ರಗಳನ್ನು ಕಲಿತಿದ್ದಲ್ಲದೆ, ಗಂಧರ್ವರಿಂದ ಹಾಡುವುದು ಮತ್ತು ನೃತ್ಯ ಮಾಡುವುದು ಹೇಗೆಂದು ಕಲಿತನು.

12 ವರ್ಷಗಳ ವನವಾಸದ ನಂತರ, ಪಾಂಡವರು ಒಂದು ವರ್ಷದ ಅಜ್ಞಾತವಾಸವನ್ನು ಪ್ರಾರಂಭಿಸಿದರು ಈ ಅವಧಿಯಲ್ಲಿ, ಅವರು ವಿರಾಟ ರಾಜ್ಯದಲ್ಲಿ ಬಂದು ನೆಲೆಸಿದರು. ಯುಧಿಷ್ಠಿರನು ವಿರಾಟ ರಾಜ್ಯದ ರಾಜನ ಸಲಹೆಗಾರನ ಕೆಲಸಕ್ಕೆ ಆಯ್ಕೆಯಾದನು , ಭೀಮನು ಅರಮನೆಯಲ್ಲಿ ಆಡುಗೆಯವನಾಗಿ ಸೇರಿಕೊಂಡನು. ಅರ್ಜುನನು ತಾನು ನಪುಂಸಕನೆಂದು ಹೇಳಿಕೊಂಡು ಅರಮನೆಯ ಕನ್ಯೆಯರಿಗೆ ಹಾಡು ಮತ್ತು ನೃತ್ಯದ ಶಿಕ್ಷಕನಾಗಿ ಕೆಲಸವನ್ನು ಪ್ರಾರಂಭಿಸಿದನು. ನಕುಲ ಸಹದೇವರು ಆಶ್ವಶಾಲೆಯಲ್ಲಿ ಶಾಲೆಯಲ್ಲಿ ಕೆಲಸ ಮಾಡಿದರೆ, ದ್ರೌಪದಿ ರಾಣಿಯ ಸೇವಕಿಯಾದಳು. ಅಜ್ಞಾತವಾಸದ ಅವಧಿಯ ಕೊನೆಯಲ್ಲಿ - ದುರ್ಯೋಧನನ ಬಹಳ ಪ್ರಯತ್ನಗಳ ಹೊರತಾಗಿಯೂ ಅವರು ಪತ್ತೆಯಾಗದ ಸಮಯದಲ್ಲಿ - ಪಾಂಡವರು ಅಜ್ಞಾತವಾಸದಿಂದ ಹೊರಬಂದು ತಾವು ಪಾಂಡವರೆಂದು ಬಹಿರಂಗಪಡಿಸಿದರು. ವಿರಾಟರಾಜನು ಈ ವಿಚಾರವನ್ನು ತಿಳಿದು ತುಂಬಾ ಉತ್ಸುಕನಾಗಿ ಅರ್ಜುನನಿಗೆ ತನ್ನ ಮಗಳನ್ನು ಮದುವೆಯಾಗಲು ಕೇಳಿಕೊಂಡನು. ಆದರೆ ಅವನು ಅವಳ ನೃತ್ಯ ಶಿಕ್ಷಕನಾಗಿದ್ದರಿಂದ ಮತ್ತು ಅವನು ಶಿಷ್ಯರನ್ನು ಅವನ ಮಕ್ಕಳಂತೆ ಭಾವಿಸಿದ್ದರಿಂದ ಈ ಮದುವೆಗೆ ನಿರಾಕರಿಸಿದನು. ಬದಲಾಗಿ ರಾಜಕುಮಾರಿಯನ್ನು ಅರ್ಜುನನ ಮಗ ಅಭಿಮನ್ಯುವಿಗೆ ಕೊಟ್ಟು ವಿವಾಹ ಮಾಡಲಾಯಿತು.

ಈ ವಿವಾಹ ಸಮಾರಂಭದಲ್ಲಿ, ಯುದ್ಧ ತಂತ್ರವನ್ನು ರೂಪಿಸಲು ಪಾಂಡವ ಮಿತ್ರ ರಾಜ್ಯದ ರಾಜರೆಲ್ಲರೂ ಒಟ್ಟುಗೂಡಿದರು. ಏತನ್ಮಧ್ಯೆ, ಶಾಂತಿಯುತವಾಗಿ ಇಂದ್ರಪ್ರಸ್ಥವನ್ನು ಪಾಂಡವರಿಗೆ ಹಿಂದಿರಿಗಿಸಲೆಂದು ಒತ್ತಾಯಿಸಲು ಹಸ್ತಿನಾಪುರಕ್ಕೆ ರಾಯಭಾರಿಗಳನ್ನು ಕಳುಹಿಸಿದ್ದರೂ, ಆ ಕಾರ್ಯಾಚರಣೆಗಳು ವಿಫಲವಾಗಿದ್ದವು. ಕೃಷ್ಣ ಸ್ವತಃ ಮಾತುಕತೆಗೆ ಹೋಗಿ ಕೌರವರನ್ನು ಒಪ್ಪಿಸಲು ವಿಫಲನಾಗಿದ್ದನು. ಪಾಂಡವರು ವಿನಂತಿಸಿಕೊಂಡ ಐದು ಹಳ್ಳಿ ಪ್ರಾಂತ್ಯಗಳು ಇರಲಿ, ಒಂದು ಅಡಿಯ ಭೂಮಿಯನ್ನು ಬಿಟ್ಟುಕೊಡಲು ದುರ್ಯೋಧನನು ನಿರಾಕರಿಸಿದನು. ಕೌರವರುೂ ಕೂಡ ತಮ್ಮ ಮಿತ್ರ ರಾಜ್ಯದ ರಾಜರನ್ನೂ ಒಟ್ಟುಗೂಡಿಸಲು ಪ್ರಾರಂಭಿಸಿದರು ಹಾಗೂ ಪಾಂಡವ ಅವಳಿ ನಕುಲ ಸಹದೇವರ ಮಾವನ ಮತ್ತು ಪಾಂಡವರ ಜೊತೆ ಇದ್ದ ಮಿತ್ರತ್ವವನ್ನು ಸಹ ಕುತಂತ್ರದಿಂದ ಮುರಿದರು. ಅಂತಿಮವಾಗಿ ಪಾಂಡವ ಕೌರವರ ನಡುವಿನ ಯುದ್ಧ ಅನಿವಾರ್ಯವಾಯಿತು.

Arjuna During the Battle of Kurukshetra
ಕುರುಕ್ಷೇತ್ರ ಕಾಳಗದ ಸಮಯದಲ್ಲಿ ಅರ್ಜುನ Unknown (Public Domain)

ಕುರುಕ್ಷೇತ್ರ ಯುದ್ಧ ಮತ್ತು ತದನಂತರ

ಯುದ್ಧದ ಕಹಳೆ ಮೊಳಗುವ ಸ್ವಲ್ಪ ಮೊದಲು, ಅರ್ಜುನನು ಸಾಲುಸಾಲಾಗಿ ನಿಂತಿರುವ ತನ್ನ ಸಂಬಂಧಿಕರನ್ನು ತನ್ನ ಎದುರಾಳಿಗಳ ಗುಂಪಿನಲ್ಲಿ ನೋಡಿದನು: ಅವನನ್ನು ಬೆಳೆಸಿದ ಮುತ್ತಜ್ಜ ಭೀಷ್ಮ, ಅವನ ಗುರುಗಳಾದ ಕೃಪ ಮತ್ತು ದ್ರೋಣ, ಅವನ ಸಹೋದರರಾದ ಕೌರವರು - ಇವರೆಲ್ಲಾರನ್ನೂ ನೋಡಿ ಒಂದು ಕ್ಷಣ ಅವನು ಈ ಯುದ್ಧದ ನಿರ್ಧಾರ ಸರಿಯೇ ಎಂಬ ಗೊಂದಲ ಹಾಗೂ ಸಂದಿಗ್ಧತೆಯಲ್ಲಿ ಬಿದ್ದನು. ಶ್ರೇಷ್ಠ ಯೋಧನೆಂದು ಹೆಸರುವಾಸಿಯಗಿದ್ದ ಕೃಷ್ಣನು ಈ ಯುದ್ಧಕ್ಕಾಗಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಅರ್ಜುನನ ರಥದ ಸಾರಥಿಯಾಗಿದ್ದನು. ಅರ್ಜುನನು ಕೃಷ್ಣನಿಗೆ "ನನ್ನನ್ನು ಹಿಂದಕ್ಕೆ ಕರೆದುಕೊಂಡು ಹೋಗು, ಕೃಷ್ಣ. ನಾನು ಈ ಜನರನ್ನು ಕೊಲ್ಲಲು ಸಾಧ್ಯವಿಲ್ಲ. ಅವರು ನನ್ನ ತಂದೆ, ನನ್ನ ಸಹೋದರರು, ನನ್ನ ಶಿಕ್ಷಕರು, ನನ್ನ ಚಿಕ್ಕಪ್ಪ, ನನ್ನ ಮಕ್ಕಳು. ಇವರಲ್ಲೆರನ್ನೂ ಕೊಂದು ಗಳಿಸುವ ರಾಜ್ಯದಿಂದ ಏನು ಪ್ರಯೋಜನ?" ಎಂದು ಕೇಳಿದನು. ಇದಕ್ಕೆ ಉತ್ತರವಾಗಿ ಕೃಷ್ಣನು ಅರ್ಜುನನಿಗೆ ಜೀವನದ ಅಶಾಶ್ವತತೆ , ಪ್ರತಿಯೊಬ್ಬ ಮನುಷ್ಯನ ಅವನ ವೃತ್ತಿಗನುಸಾರವಾದ ಕರ್ತವ್ಯಕ್ಕೆ ಬದ್ಧವಾಗಿರುವ ಮಹತ್ವವನ್ನು ಒಂದು ಬಹುದೊಡ್ಡ ತಾತ್ವಿಕ ಪ್ರವಚನ ರೂಪದಲ್ಲಿ ವಿವರಿಸಿದನು. ಈ ಪ್ರವಚನ ಇಂದು "ಭಗವದ್ಗೀತೆ" ಎಂಬ ಬಹಳ ಪ್ರಸಿದ್ಧವಾದ ಪ್ರತ್ಯೇಕ ಗ್ರಂಥರೂಪದಲ್ಲಿ ಪ್ರಕಟವಾಗಿದೆ. ಈ ದೀರ್ಘ ವಿವರಣೆಗಳಿಂದ ಅರ್ಜುನ ಗೊಂದಲವು ನಿವಾರಣೆಯಾಗಿ ಅವನು ಮತ್ತೆ ತನ್ನ ಬಿಲ್ಲನ್ನು ಎತ್ತಿ ಯುದ್ಧಕ್ಕೆ ಅಣಿಯಾದನು.

सुखदुखे समे कृत्वा लाभालाभौ जयाजयौ। ततो युद्धाय युज्यस्व नैवं पापमवाप्स्यप्ति।। ಒಬ್ಬ ವ್ಯಕ್ತಿಯು ಸಂತೋಷ ಮತ್ತು ದುಃಖ, ಲಾಭ ಮತ್ತು ನಷ್ಟ, ಗೆಲುವು ಮತ್ತು ಸೋಲನ್ನು ಸಮಾನವಾಗಿ ನೋಡಿಕೊಂಡು ಯುದ್ಧಕ್ಕೆ ಮುಂದಾದರೆ, ಅದನ್ನು ಪಾಪವೆಂದು ಪರಿಗಣಿಸಲಾಗುವುದಿಲ್ಲ . [2.38]
कर्मण्येवाधिकारस्ते मा फलेषु कदाचन । मा कर्मफलहेतुर्भूर्मा ते सङ्गोऽस्त्वकर्मणि ॥ ಅವನಿಗೆ ಕೆಲಸ ಮಾಡುವ ಹಕ್ಕು ಮಾತ್ರ ಇದೆ; ಅದರ ಫಲಗಳ ಮೇಲೆ ಅವನಿಗೆ ಯಾವುದೇ ಹಕ್ಕಿಲ್ಲ. ಬೇಕಾಗಿರುವ ಫಲಿತಾಂಶವನ್ನು ಗಮನದಲ್ಲಿಟ್ಟುಕೊಂಡು ಕಾರ್ಯವನ್ನು ಕೈಗೆತ್ತಿಕೊಳ್ಳುವುದೇ ತಪ್ಪು ; ಹಾಗೆಯೇ ಸುಮ್ಮನೆ ಕೆಲಸ ಮಾಡದೇ ಇರುವುದೂ ತಪ್ಪು. [2.47]

ಈ ಯುದ್ಧ 18 ದಿನಗಳ ಕಾಲ ತೀವ್ರವಾಗಿ ನಡೆಯಿತು. ಒಟ್ಟು 18 ಅಕ್ಷೌಹಿಣಿಗಳು - ಪಾಂಡವರ 7 ಮತ್ತು ಕೌರವರ 11 (1 ಅಕ್ಷೌಹಿಣಿ = 21,870 ರಥಗಳು + 21,870 ಆನೆಗಳು + 65,610 ಕುದುರೆಗಳು + 109,350 ಕಾಲ್ನಡಿಗೆಯ ಸೈನಿಕರು) ಪಡೆಗಳು ಈ ಯುದ್ಧದಲ್ಲಿ ಭಾಗಿಯಾಗಿದ್ದವು. ಯುದ್ಧದಲ್ಲಿ ಎರಡೂ ಕಡೆಯ ಅಪಾರ ಸಾವುನೋವುಗಳು ಉಂಟಾಗಿದ್ದವು. ಕೊನೆಯಲ್ಲಿ ಪಾಂಡವರು ಯುದ್ಧದಲ್ಲಿ ಜಯಶೀಲರಾದರು. ಆದರೆ ದ್ರೌಪದಿಯ ಕುಟುಂಬದ ಎಲ್ಲ ಪುರುಷರೂ, ಪಾಂಡವರಿಂದಾದ ದ್ರೌಪದಿಯ ಮಕ್ಕಳು,ಬಹುತೇಕ ಹತ್ತಿರದ ಸಂಬಂಧಿಗಳನ್ನು ಮತ್ತು ಪ್ರೀತಿಪಾತ್ರರನ್ನು ಕಳೆದುಕೊಂಡರು. ಯುದ್ಧದಲ್ಲಿ ದುರ್ಯೋಧನ ಮತ್ತು ಎಲ್ಲಾ ಕೌರವರು ಮರಣ ಹೊಂದಿದರು. ಕರ್ಣನು ಯುದ್ಧದಲ್ಲಿ ಸತ್ತ ಮೇಲೆ ಅವನು ಪಾಂಡುವಿನೊಂದಿಗೆ ವಿವಾಹವಾಗುವ ಮೊದಲು ಕುಂತಿಗೆ ಹುಟ್ಟಿದ ಮಗನೆಂದು ಬಹಿರಂಗವಾಯಿತು. ಹಾಗೆ ನೋಡಿದರೆ, ನ್ಯಾಯಸಮ್ಮತವಾಗಿ ಕರ್ಣನೇ ಹಿರಿಯ ಪಾಂಡವನಾಗಿ ಸಿಂಹಾಸನದ ಹಕ್ಕುಬದ್ಧ ಉತ್ತರಾಧಿಕಾರಿಯಾಗಬೇಕಿತ್ತು. ಈ ಕಡೆ ವೃದ್ಧನಾದ ಭೀಷ್ಮನು ಮರಣಶಯ್ಯೆಯಲ್ಲಿ ಇದ್ದನು. ಯುದ್ಧದಲ್ಲಿ ಸತ್ತವರ ಪಟ್ಟಿ ಬೆಳೆಯುತ್ತಲೇ ಇತ್ತು - ಗುರು ದ್ರೋಣ ಮತ್ತು ಹಲವಾರು ಸಂಬಂಧಿಕರು, ರಕ್ತಸಂಬಂಧಿಕರು ಅಥವಾ ವಿವಾಹದ ಮೂಲಕ ಅವರೊಂದಿಗೆ ಸಂಬಂಧ ಹೊಂದಿದ್ದವರು, ಸೈನಿಕರೂ ಸೇರಿದಂತೆ ಸುಮಾರು ಮೂರು ತಲೆಮಾರುಗಳನ್ನು ಈ ಯುದ್ಧವೂ ಬಳಿ ತೆಗೆದುಕೊಂಡಿತ್ತು. ಈ ಯುದ್ಧವು ಹಿಂದೆಂದೂ ಕಂಡರಿಯದ ಬಹುದೊಡ್ಡ ಯುದ್ಧವಾಗಿತ್ತು, ಅದು ಮಹಾ ಭಾರತದ ಯುದ್ಧ, ಮಹಾಭಾರತ.

ಯುದ್ಧದ ನಂತರ, ಯುಧಿಷ್ಠಿರನು ಹಸ್ತಿನಾಪುರ ಮತ್ತು ಇಂದ್ರಪ್ರಸ್ಥದ ರಾಜನಾದನು. ಪಾಂಡವರು 36 ವರ್ಷಗಳ ಕಾಲ ಆಳ್ವಿಕೆ ನಡೆಸಿದನಂತರ ಅಭಿಮನ್ಯುವಿನ ಮಗ ಪರೀಕ್ಷಿತನಿಗೆ ರಾಜನನ್ನಾಗಿ ಮಾಡಿ ರಾಜ್ಯದ ನೇತೃತ್ವವನ್ನು ಅವನಿಗೆ ವಹಿಸಿದರು. ಇದರ ನಂತರ ದ್ರೌಪದಿ ಮತ್ತು ಪಾಂಡವರು ತಮ್ಮ ಕೊನೆಯ ದಿನಗಳನ್ನು ಹಿಮಾಲಯ ಪರ್ವತದಲ್ಲಿ ಕಳೆಯಲು ಕಾಲ್ನಡಿಗೆಯಲ್ಲಿ ಹೊರಟರು. ಈ ಪ್ರಯಾಣದಲ್ಲಿ ಪಾಂಡವರು ಒಬ್ಬೊಬ್ಬರಾಗಿ ಮೃತರಾಗಿ ಅವರ ಆತ್ಮಗಳು ಸ್ವರ್ಗವನ್ನು ಸೇರಿದವು. ವರ್ಷಗಳ ನಂತರ, ಪರೀಕ್ಷಿತನ ಮಗ ಅವನ ತಂದೆಯ ನಂತರ ರಾಜನಾಗಿ ಒಂದು ದೊಡ್ಡ ಯಜ್ಞವನ್ನು ಮಾಡಿದನು ಹಾಗು ಈ ಯಜ್ಞದ ಸಂದರ್ಭದಲ್ಲಿ ಸಂಪೂರ್ಣ ಈ ಮಹಾಭಾರತದ ಕಥೆಯನ್ನು ಮೊದಲ ಬಾರಿಗೆ ವ್ಯಾಸನ ಶಿಷ್ಯನಾದ ವೈಶಂಪಾಯನು ಪಠಿಸಿದನು.

ಪರಂಪರೆ

ಆಗಿನಿಂದ ಹಿಡಿದು, ಈ ಕಥೆಯನ್ನು ಲೆಕ್ಕವಿಲ್ಲದಷ್ಟು ಬಾರಿ ಪುನರ್ವರ್ತಿಸಿ , ವಿಸ್ತರಿಸಿ, ಪುನಃ ಪುನಃ ಹೇಳಲಾಗಿದೆ. ಮಹಾಭಾರತವು ಇಂದಿಗೂ ಭಾರತದಲ್ಲಿ ಜನಪ್ರಿಯವಾಗಿದೆ. ಇದನ್ನು ಹಲವಾರು ಚಲನಚಿತ್ರಗಳು ಮತ್ತು ನಾಟಕಗಳಲ್ಲಿ ಆ ಸಮಯಕ್ಕೆ ಅನುಗುಣವಾಗಿ ಅಳವಡಿಸಿಕೊಂಡು ಪುನರ್ನಿರ್ಮಿಸಲಾಗಿದೆ. ಮಹಾಕಾವ್ಯದಲ್ಲಿನ ಪಾತ್ರಗಳ ಹೆಸರನ್ನು ಮಕ್ಕಳಿಗೆ ಇಡುವ ಪರಿಪಾಠವೂ ಇದೆ. ಭಗವದ್ಗೀತೆಯು ಹಿಂದೂ ಧರ್ಮದ ಪವಿತ್ರ ಗ್ರಂಥಗಳಲ್ಲಿ ಒಂದಾಗಿದೆ. ಭಾರತದ ಆಚೆಗೆ ಆಗ್ನೇಯ ಏಷ್ಯಾದಲ್ಲಿ ಇಂಡೋನೇಷ್ಯಾ ಮತ್ತು ಮಲೇಷ್ಯಾದಂತಹ ದೇಶಗಳಲ್ಲಿ ಹಿಂದೂ ಧರ್ಮದಿಂದ ಪ್ರಭಾವಿತವಾದ ಸಂಸ್ಕೃತಿಗಳಲ್ಲಿ ಮಹಾಭಾರತ ಕಥೆ ಜನಪ್ರಿಯವಾಗಿದೆ.

ಗ್ರಂಥಸೂಚಿ

ವಿಶ್ವ ಇತಿಹಾಸ ಎನ್ಸೈಕ್ಲೋಪೀಡಿಯಾ ಅಮೆಜಾನ್ ಅಸೋಸಿಯೇಟ್ ಆಗಿದ್ದು, ಅರ್ಹತೆ ಪಡೆದ ಪುಸ್ತಕ ಖರೀದಿಯ ಮೇಲೆ ಆಯೋಗವನ್ನು ಗಳ

ಅನುವಾದಕನ ಬಗ್ಗೆ

Dilip Sitaram
ನಾನು ದಿಲೀಪ ಸೀತಾರಾಮ, ಇಂಜಿನಿಯರಿಂಗ್ ಪದವೀಧರ. ಈ ಇಂಗ್ಲಿಷ್ -ಕನ್ನಡ ತರ್ಜುಮೆ ಅವಕಾಶವನ್ನು ನಾನು ಎರಡು ರೀತಿಯಲ್.

ಲೇಖಕರ ಬಗ್ಗೆ

Anindita Basu
ಅನಿಂದಿತಾ ಒಬ್ಬ ತಾಂತ್ರಿಕ ಬರಹಗಾರ್ತಿ ಮತ್ತು ಸಂಪಾದಕಿ. ಇದಲ್ಲದೇ ಅವರು ದತ್ತಾಂಶ ದೃಶ್ಯೀಕರಣ ಮತ್ತು ವ್ಯುತ್ಪತ್ತಿಶಾಸ್ತ್ರ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ.

ಈ ಕೆಲಸವನ್ನು ಉಲ್ಲೇಖಿಸಿ

ಎಪಿಎ ಶೈಲಿ

Basu, A. (2025, September 14). ಮಹಾಭಾರತ. (D. Sitaram, ಅನುವಾದಕ). World History Encyclopedia. https://www.worldhistory.org/trans/kn/1-12122/

ಚಿಕಾಗೊ ಶೈಲಿ

Basu, Anindita. "ಮಹಾಭಾರತ." ಅನುವಾದಿಸಿದವರು Dilip Sitaram. World History Encyclopedia, September 14, 2025. https://www.worldhistory.org/trans/kn/1-12122/.

ಎಂಎಲ್ಎ ಸ್ಟೈಲ್

Basu, Anindita. "ಮಹಾಭಾರತ." ಅನುವಾದಿಸಿದವರು Dilip Sitaram. World History Encyclopedia, 14 Sep 2025, https://www.worldhistory.org/trans/kn/1-12122/.

ಜಾಹೀರಾತುಗಳನ್ನು ತೆಗೆದು